ವಾಲ್ಕಾಟ್, ಡೆರೆಕ್ ಆಲ್ಟನ್
	1930-. ವೆಸ್ಟ್ ಇಂಡಿಸ್‍ನ ಪ್ರಸಿದ್ಧ ಕವಿ ಹಾಗೂ ನಾಟಕಕಾರ.  ಸೇಂಟ್ ಲೂಸಿಯ ಕಾಸ್ಟ್ರೀಸ್‍ನಲ್ಲಿ 1930ರಲ್ಲಿ ಜನಿಸಿದ. ಸಾಹಿತ್ಯಸಾಧನೆಗಾಗಿ ನೊಬೆಲ್ ಪ್ರಶಸ್ತಿ ಗಳಿಸಿದ.  ಬಂಡವಾಳಶಾಹಿ ಪದ್ಧತಿಯ ಗುಲಾಮಗಿರಿಯಿಂದ ಸ್ವಾತಂತ್ರ್ಯದೆಡೆಗೆ ಸಾಗಿದ ಇವನ ಕೆರೇಬಿಯನ್ ಜೀವನಾನುಭವವನ್ನೂ ವಸಾಹತುಶಾಹಿ ಪೂರ್ವ ಕೆರೇಬಿಯನ್ ಇತಿಹಾಸವನ್ನೂ ವಿವಿಧ ಸಂಸ್ಕøತಿ ಸಂಪ್ರದಾಯಗಳು ಮೇಳೈಸಿದ ಸಾಮಾಜಿಕ ಪರಿಸ್ಥಿತಿಗಳನ್ನೂ ಇವನ ಸಾಂಸ್ಕøತಿಕ ಹಿನ್ನೆಲೆಯನ್ನೂ ಆಫ್ರಿಕನ್ ಯುರೋಪಿಯನ್ ಜನಾಂಗೀಯ ಸಂಸ್ಕøತಿಯನ್ನೂ ಇವನ ಕೃತಿಗಳು ಚಿತ್ರಿಸುತ್ತವೆ.
	1948-60ರ ವರೆಗಿನ ಕವನ ಸಂಗ್ರಹ ಇನ್ ಎ ಗ್ರೀನ್ ನೈಟ್ (1962). ಈ ಸಂಗ್ರಹ ಇವನ ಮೊದಲ ಪ್ರಕಟಿತ ಕೃತಿ. ಅನದರ್ ಲೈಫ್ (1973) ಒಂದು ಕಥನಕವನ.  ದ ಸ್ಟಾರ್ ಆ್ಯಪಲ್ ಕಿಂಗ್‍ಡಮ್ (1979), ದ ಫಾರ್ಚುನೇಟ್ ಟ್ರಾವಲರ್ (1981), ದ ಆರ್ಕನ್ಸಾಸ್ ಟೆಸ್ಟ್‍ಮೆಂಟ್ (1987) ಹಾಗೂ ಒಮೆರಾಸ್ (1990) ಮಹಾಕಾವ್ಯ ಇವನ ಪ್ರಮುಖ ಕೃತಿಗಳು.
	ಡ್ರೀಮ್ ಆನ್ ಮಂಕೀಮೌಂಟನ್ (1967), ರಿಮೆಂಬರನ್ಸ್ (1977) ಪ್ಯಾಂಟಮೈಮ್ (1978) ಹಾಗೂ ಒಡಿಸ್ಸಿ ; ಎ ಸ್ಟೇಜ್ ವರ್ಷನ್ — ಈ ಕೆಲವು ಇವನ ನಾಟಕ ಕೃತಿಗಳಾಗಿವೆ.  ಸಮಾಜದಲ್ಲಿನ ದಬ್ಬಾಳಿಕೆ, ಬೂಟಾಟಿಕೆಗಳ ವಿರುದ್ಧ ಸೆಣೆಸಾಟ ಈ ನಾಟಕ ಕೃತಿಗಳ ವಸ್ತುವಾಗಿದೆ.								
(ಜಿ.ಎನ್.ಎಸ್.)